ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 20 May 2014

ಹೊಸ ನೀರು; ಪ್ರವಾಹ!


ನೆನ್ನೆ ಕಳೆದ ಬೆಚ್ಚಿ ಬೀಳಿಸಿದ್ದ
ಕನವರಿಕೆಗಳಿಗೆ, ನಾಳೆ
ಬರಬೇಡಿರೆಂದು ಹೇಳಿದ್ದೆ;
ಕೇಳಬೇಕಲ್ಲ ಅವು? ಬಂದೇ ಬಿಟ್ಟವು!
ಕನವರಿಕೆಗಳೇ ಹಾಗೇನೋ?
ಒಂದಿಲ್ಲೊಂದು ಕೋನದಿಂದ
ಅಂದಗಾಣಿಸುತ್ತೇನೆಂದು ನಂಬಿಸಿ
ಮತ್ತೆ ಹಾರಿ ಬಂದೇ ಬಿಡುವವು!
ನಮಗೋ ಕಾಣದ ದೈವಕ್ಕಿಂತ
ಕಂಡ ದೆವ್ವವೇ ಚೆಲುವು,
ಒಮ್ಮೆ ಕಂಡಿದ್ದೇವೆಂಬ ಗೆಲುವು...

ಭಾರತ ಪ್ರಕಾಶಿಸುತ್ತದೆ,
ಮುನ್ನಡೆಯುತ್ತದೆ ನನ್ನ ಇಂಡಿಯಾ...

ಮುಸುಕಿನಲ್ಲಿ ನಡೆದ ಕಾಮಕೇಳಿಗಳಿಗೆ
ಸಿಕ್ಕಿದೆಯಂತೆ ರಜತ ಪರದೆ,
ಸಂಸತ್ತಿನ ಯಾವ ಮೂಲೆಗಳೂ
ಮೊಬೈಲು ಹಿಡಿದು ಕೂರದಿರಲಪ್ಪ(?!)
ನಾಯಕನಾದರು ಹಿಡಿದೇ ನಿಲ್ಲಲಿ ಕೋಲು;
ಹೇಗಾದರೊಂದು ಉಳಿಯಲಿ
ದೇಶದ ಮಾನ ಎಂಬುದೊಂದೇ ಅಳಲು!

ಭಾರತ ಪ್ರಕಾಶಿಸುತ್ತದೆ,
ಮುನ್ನಡೆಯುತ್ತದೆ ನನ್ನ ಇಂಡಿಯಾ...

ದೇಶದ ಆಯವ್ಯಯದಿ
ರಕ್ಷಣೆಯದೇ ಸಿಂಹ ಪಾಲು,
'ದುಡಿದುದೆಲ್ಲವನೂ ಟ್ಯಾಕ್ಸು ಕಟ್ಟಿ'
ಜೀವ ಉಳಿಸಿದೆ ನಮ್ಮ ಸಾಲು;
ಈಗಾಗಲೇ
ವರ್ಷಕ್ಕೊಂದೈವತ್ತು ತಲೆಗಳನು
ಗಡಿಗಳ ಸೀಸು ಫೈರಿಗೆ
ತರಗೆಲೆಯಂದದಿ ತೆರುತಿದ್ದೇವೆ;
ಇನ್ಯಾಕೆ ಬೇಕ್ಹೇಳಿ ಮತ್ತೊಂದು ಯುದ್ದ?
ಉಳಿದುಹೋಗಲಿ ಬಿಡಿ
ಒಂದಷ್ಟು ಪ್ರಾಣ;
ನಾಯಕ ಮೈಗೂಡಿಸಿಕೊಂಡರೊಳಿತು
ಸ್ನೇಹ-ಸೌಹಾರ್ದತೆಗಳ ತ್ರಾಣ!

ಭಾರತ ಪ್ರಕಾಶಿಸುತ್ತದೆ,
ಮುನ್ನಡೆಯುತ್ತದೆ ನನ್ನ ಇಂಡಿಯಾ...

--> ಮಂಜಿನ ಹನಿ

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ