ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 18 October 2014

ಕತ್ತಲಿನ ಕವಿತೆ!


ನಿನ್ನೊಲವಿನ
ದಿವಿನಾದನುಭೂತಿಗಳು
ನನ್ನೆದೆಯನು ಹದವಾಗಿ
ಬೇಯಿಸಲು,
ಹಸಿ ಸೌದೆಯ ಬಿಸಿ ಶಾಖಕೆ
ಕಣ್ಣು ಪಸೆಯಾಡಿ
ಮತ್ತೆ ಮತ್ತೆ ನನ್ನ ಸಾವು,
ಒಲವ ಘೋರಿಯ ಮೇಲೆ
ನನ್ಹೆಸರ ಕೆತ್ತಿಟ್ಟ
ನಿನ್ನ ನುಣುಪು ಕೈ ರೇಖೆಗಳು
ನೆನಪಾಗಲು
ಮತ್ತೆ ಮರು ಹುಟ್ಟು, ಹೊತ್ತಿದ್ದೇನೆ!

ಎದುರಿಗೆ ಕೈ ಕೈ ಬೆಸೆದು
ನಡೆವ ಒಲವ ಜೋಡಿಗಳ ನೋಡಿ,
ಹಿಂದೊಮ್ಮೆ ನಾನೂ
ಒಲವ ಘಮಕ್ಕೆ ಅರಳಿಕೊಳ್ಳುವ
ದಿನಗಳ ನೆನಪು;
ಕತ್ತಲ ರಾತ್ರಿಗಳು ಕಾದ ಹೆಂಚು,
"ನಿಂಗೊತ್ತಲ್ಲ? ನಂಗೆ ಕತ್ತಲಂದ್ರೆ ಭಯ?"
ನೀ ಉಸುರಿದ್ದು ನನ್ನೆದೆಗಂಟಿ
ರಕ್ತದೊಂದಿಗೆ ಕುದ್ದ
ಕಮಟು ಕಮಟಾಗುತ್ತದೆ,
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕತೆ,
ಸಮಾಜದ ಮೇಲಿನ ನಂಬಿಕೆ
ಉರಿದು ಹೋಗುವುದು
ಸಣ್ಣ ಸಮಾಧಾನ ಕೊಡುತ್ತದೆ!

ಈ ರಾತ್ರಿಗಳು ಮಾತ್ರ
ಒಂದು ಸಮವಿರುವುದಿಲ್ಲ ನೋಡು,
ಮೈಯ ಕಣಕಣವೂ ಹುರಿಗೊಂಡು,
ರಕ್ತ ನಾಳಗಳಲಿ ಪಟಪಟ ಮಿಡಿತ,
ನೆರವೇರದ ಪೋಲಿ ಆಸೆಯೊಂದು
ಎದೆಯೊಳಗೆ ಭಗ್ಗನೆ
ಹೊತ್ತಿಕೊಂಡು ಉರಿದು,
ನಾ ಸ್ಖಲನಗೊಳ್ಳದೆ ಮಡುಗಟ್ಟುವಾಗ
ನಿನ್ನ ಮೈಥುನದ ಸವಿಯುಂಡ
ನರಳಿಕೆಗಳಿಗೆ
ಕನ್ನಡಿ ಸಾಕ್ಷಿಯಾಗಿ ನಗುತ್ತದೆ,
ನಾನು ಅಸಹನೆಯಿಂದ ಮುಖ ಮುಚ್ಚಲು,
ಕತ್ತಲಿನ ಕವಿತೆಯೊಂದು
ಆಹಾರ ಸಿಕ್ಕಂತಾಗಿ ಮಿಸುಕಾಡುತ್ತದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

1 comment:

  1. 'ಕತ್ತಲಿನ ಕವಿತೆಯೊಂದು
    ಆಹಾರ ಸಿಕ್ಕಂತಾಗಿ ಮಿಸುಕಾಡುತ್ತದೆ!'
    ವಾವ್ ಕವಿಯೇ. ರಸಿಕೋತ್ತಮತೆಯು
    ಅಕ್ಷರ ಅಕ್ಷರಗಳಲೂ ಮೇಳೈಸಿದೆ ಕವಿತೆಯಲ್ಲಿ.

    ReplyDelete