ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 17 January 2013

ಕಂಡಷ್ಟು, ಉಂಡಷ್ಟು: ಆಧುನಿಕ ಕನ್ನಡ ಸಾಹಿತ್ಯ!



ಸಾಹಿತ್ಯಿಕವಾಗಿ ಕನ್ನಡ ಕಾವ್ಯವನ್ನು ವಿಮರ್ಶಿಸುವುದಾದರೆ, ಕಾವ್ಯ ಪ್ರತಿಯೊಂದು ಕಾಲಘಟ್ಟದಲ್ಲಿಯೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಸಾಗಿದೆ. ಕಾವ್ಯ ಹೀಗೇ ಇರಬೇಕೆಂಬ ಕಟ್ಟುಪಾಡುಗಳನ್ನು ಮೀರಿ ಬೆಳೆದು ನಿಂತಿದೆ. ಹಾಗೆ ಬೆಳೆದು ನಿಂತ ಪ್ರತಿಯೊಂದು ಸಾಹಿತ್ಯ ಪ್ರಕಾರಗಳನ್ನು ಸಾಹಿತ್ಯ ಕ್ರಾಂತಿಗಳೆಂದೂ ಅರ್ಥೈಸಬಹುದು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಾದ ಕ್ರಿಯಾಶೀಲ ಕ್ರಾಂತಿ ಕನ್ನಡ ಸಾಹಿತ್ಯಕ್ಕೆ ಮೆರುಗನ್ನು ನೀಡಿದ್ದಲ್ಲದೇ ಕನ್ನಡ ಸಾಹಿತ್ಯವನ್ನು ಜಾಗತಿಕ ಸಾಹಿತ್ಯದ ಮಟ್ಟಕ್ಕೆ ಕೊಂಡೊಯ್ಯಿತು ಎಂಬುದು ನಿರ್ವಿವಾದ. ಶಾಸ್ತ್ರೀಯ ಸಾಹಿತ್ಯ, ರಾಜಾಶ್ರಯ ಸಾಹಿತ್ಯ, ಹಳೆಗನ್ನಡ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಬೆಳೆದುಬಂದ ಕನ್ನಡ ಸಾಹಿತ್ಯ ಹದಿನೆಂಟನೆಯ ಶತಮಾನದ ಅಂತ್ಯಕ್ಕೆ ನವೋದಯ ಸಾಹಿತ್ಯವಾಗಿ ಚಿಗುರೊಡೆಯಿತು.

ಕುವೆಂಪು, ಬಿ.ಎಂ.ಶ್ರೀ, ಬೇಂದ್ರೆ ಅಜ್ಜ ಮತ್ತು ಮೊದಲಾದವರಿಂದ ಮೊದಲ್ಗೊಂಡ ನವೋದಯ ಸಾಹಿತ್ಯ ಓದುಗರಿಗೆ ಒಂದು ರೀತಿಯ ಏಕತಾನತೆಯನ್ನು ಅನುಭಾವಕ್ಕೆ ಕೊಟ್ಟಾಗ, ನವೋದಯೊತ್ತರ ಸಾಹಿತ್ಯ ರಚನೆಗೊಳ್ಳಲು ಪ್ರಾರಂಭವಾಯ್ತು. ಆ ಘಟನೆ ನವ್ಯ ಸಾಹಿತ್ಯದ ರಚನೆಗೆ ಪ್ರೇರಣೆಯಾಯ್ತು. ನವ್ಯ ಸಾಹಿತ್ಯವು ರಚನೆಗೊಂಡ ಹೊಸದರಲ್ಲಿ ಓದುಗರ ಮೆಚ್ಚುಗೆ ಪಡೆದದ್ದು ಸುಳ್ಳಲ್ಲ. ಆದರೆ ನವ್ಯ ಸಾಹಿತ್ಯವು ಬಹುವಾಗಿ ಪಾಶ್ಚಾತ್ಯ ಮತ್ತು ಆಂಗ್ಲ ಸಾಹಿತ್ಯದ ಪ್ರೇರಣೆಯಿಂದ ರೂಪುಗೊಂಡದ್ದು. ಇಲ್ಲಿ ಜನಸಾಮಾನ್ಯರ ದನಿ ಅವನತಿಯ ಹಾದಿ ಹಿಡಿದು, ಕನ್ನಡ ಸಾಹಿತ್ಯ ನಿಂತ ನೀರಾಗುವುದೇನೋ ಎಂಬ ಭ್ರಮಾತೀತ ಪರಿಸ್ಥಿತಿಗಳು ಸೃಷ್ಟಿಯಾದವು. ಈ ರೀತಿಯ ಸಾಹಿತ್ಯಿಕ ಭ್ರಾಂತಿ ಆ ಕಾಲದ ಕಾವ್ಯ ಕೃಷಿಯ ಮಾರ್ಗಗಳನ್ನು ತ್ಯಜಿಸುವುದಷ್ಟೇ ಅಲ್ಲದೇ ಅವುಗಳ ಸ್ಪೂರ್ತಿಯ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಅವುಗಳ ಮೌಲ್ಯಗಳನ್ನು ತ್ಯಜಿಸದ ಹೊರತು ದೂರವಾಗುವಂತದ್ದಾಗಿರಲಿಲ್ಲ. ಕೇವಲ ಅಚ್ಚಿಸುವ ತಂತ್ರಜ್ಞಾನಗಳು ಬದಲಾಗುವುದರಿಂದ ಅದು ಸಾಧ್ಯವಿಲ್ಲದ್ದಾಗಿತ್ತು! ಇಲ್ಲಿಯವರೆಗೂ ರಚನೆಗೊಂಡ ಕಾವ್ಯದ ಮೂಲ ಸ್ವರೂಪ ಲಯಬದ್ಧವಾಗಿದ್ದು, ಅದಕ್ಕೆ ತನ್ನದೇ ಆದ ಸಾಂಕೇತಿಕ ಸಿದ್ಧ ಶೈಲಿ ಮತ್ತು ತಂತ್ರಗಳನ್ನು ಒಳಗೊಂಡಿತ್ತು.

ಅಲ್ಲಿಯವರೆಗೂ ಕ್ರಾಂತಿ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿತ್ತು. ಜನರ ಆಗು ಹೋಗುಗಳಿಗೆ, ಗ್ರಾಮೀಣ ಪರಿಕಲ್ಪನೆಗಳಿಗೆ, ಜೀವನಾನುಭವ ಮತ್ತು ತಿಳುವಳಿಕೆಗಳಿಗೆ ಒಗ್ಗಿಕೊಂಡಂತೆ ಸಾಹಿತ್ಯ ಸೃಷ್ಟಿ ಅಸಾಧ್ಯ ಎಂದಾದಾಗ, ತೇಜಸ್ವಿ ಮತ್ತು ದೇವನೂರ ಮಹದೇವರವರ ಮುಂದಾಳತ್ವದಲ್ಲಿ ನವ್ಯೊತ್ತರ, ದಲಿತ ಮತ್ತು ಬಂಡಾಯ ಸಾಹಿತ್ಯಗಳ ಕಾವ್ಯ ಸೃಷ್ಟಿ ಸಾಧ್ಯವಾಯ್ತು. ಇದು ಜನರ ಮಧ್ಯೆ ನುಡಿದಂತೆ ಸಾಗಿಬೆಳೆದ ಸಾಹಿತ್ಯ. ಈ ಹಂತದಲ್ಲಿ ಕಾವ್ಯ ಕ್ರಾಂತಿಕಾರಕ ಧೋರಣೆಗಳಿಗೆ ಒಗ್ಗಿಕೊಂಡಿತು. ಕಾವ್ಯದ ಆಮೂಲಾಗ್ರ ಬದಲಾವಣೆಯಾಯ್ತು, ಇಲ್ಲಿ ಸೃಷ್ಟಿಯಾದ ಸಾಹಿತ್ಯದ ಉದ್ದೇಶಗಳು ನಿನಾದವಾಗಿರದೇ ಜನರ ನಾಡಿ ಮಿಡಿತಕ್ಕೆ ಸ್ಪಂದಿಸುವುದಾಗಿತ್ತು. ಹಾಗೆ ಸೃಷ್ಟಿಯಾದ ಕಾವ್ಯವನ್ನು ಕವಿ ನುಡಿಸಿದ್ದು ತನ್ನದೇ ಧಾಟಿಯಲ್ಲಿ. ಈ ಮೂಲಕ ಹರಿದು ಬಂದ ಸಾಹಿತ್ಯವು ಓದುಗನ ಕಾಲಿಗೆ ತೊಡರಿ, ಓದುಗನದಾಗುತ್ತದೆ. ಓದುಗ ಅದನ್ನು ತನ್ನದು ಮಾಡಿಕೊಳ್ಳಬೇಕಾದ ಜವಾಬ್ದಾರಿ ಓದುಗನದ್ದು. ಇಲ್ಲಿ ಕಾವ್ಯ ಮತ್ತು ಓದುಗ ಇಬ್ಬರೂ ಕ್ರಿಯಾಶೀಲರಾಗಿದ್ದು, ಪೂರ್ವಾಗ್ರಹ ಪೀಡಿತರಾಗದೇ ಇರಬೇಕು.

ಕಾವ್ಯ ಓದುಗನಿಗೆ ದಕ್ಕುವುದೇ ಇಲ್ಲ ಎಂದು ಸತ್ಯಾಗ್ರಹ ಹೂಡಿ ಕೂರುವುದಲ್ಲ! ಜೊತೆಗೆ ಓದುಗ ಕಾವ್ಯ ಅದಾಗದೇ ಬಂದು ನನ್ನನ್ನು ಸೋಕಿ ಹೋದರೆ ಹೋಗಲಿ, ನಾನು ಮಾತ್ರ ಪ್ರಯತ್ನಿಸುವುದಿಲ್ಲ ಎಂದು ಇದ್ದುಬಿಡುವುದೂ ಸಲ್ಲ. ಕಾವ್ಯವೂ ಕೈಚಾಚಬೇಕು, ಓದುಗನೂ ಕೈಚಾಚಬೇಕು. ಅವನ ಅರಗಿಸಿಕೊಳ್ಳುವಿಕೆಗೂ, ಕಾವ್ಯದ ಸಾರಕ್ಕೂ ಅನುಸಂಧಾನವಾಗಬೇಕು, ಆಗಷ್ಟೇ ಒಂದು ಸೌಹಾರ್ದಯುತವಾದ ಹೊಂದಾಣಿಕೆಯ ಜ್ಞಾನದ ಹಸ್ತಲಾಘವ ಸಾಧ್ಯ.  ನನಗೆ ಅನುಭಾವಕ್ಕೆ ಸಿಕ್ಕ ಸಾಹಿತ್ಯವನ್ನು ಇಷ್ಟು ಮಾತ್ರ ಅರುಹಲು ಪ್ರಯತ್ನಿಸಿದ್ದೇನೆ.

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

1 comment:

  1. ಪುಟ್ಟದಾದರೂ ವಿಷಯ ವ್ಯಾಪ್ತಿಯ ಆಕರವಾಗಿದೆ ಈ ಬರಹ. ಕೊನೆಯ ಪ್ಯಾರಾದಲ್ಲಿರುವ ಪ್ರಾಮಾಣಿಕತೆ ನನಗೆ ನೆಚ್ಚಿಗೆಯಾಯ್ತು.

    ReplyDelete