ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 27 December 2012

ಗಂಡಸರೆನ್ನಿಸಿಕೊಳ್ಳುವಂತಹ ನಾವೆಷ್ಟು ಸಭ್ಯರು!?!




ದೆಹಲಿಯಲ್ಲಿ 23 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಮಾನ ಹರಣಗೊಂಡು, ಮಾನಸಿಕವಾಗಿ ಮತ್ತು ದೈಹಿಕವಾಗಿ ಘಾಸಿಗೊಂಡು ತನ್ನ ಪ್ರಾಣವನ್ನೂ ಈ ರಕ್ತ ಪಿಪಾಸುಗಳಿಗೆ ಬಲಿಕೊಟ್ಟದ್ದನ್ನು ನೆನಪಿಸಿಕೊಂಡಾಗ ಮೈಯೆಲ್ಲಾ ಉರಿದು ಹೋಗಿ ನಮ್ಮ ಸಮಾಜದ ಮೇಲೆ, ನಮ್ಮ ಗಂಡು ಜಾತಿಯ ಮೇಲೇ ಅಸಹ್ಯ ಹುಟ್ಟುತ್ತದೆ! ಹೆಣ್ಣು ತನ್ನೆಲ್ಲಾ ಕಾಲಘಟ್ಟಗಳಲ್ಲಿ ನಂಬುವ ತಂದೆ, ಅಣ್ಣ, ತಮ್ಮ, ಗೆಳೆಯ, ಗಂಡ, ಮಾವ, ಭಾವ, ಮೈದುನ, ಮಗ ಹೀಗೆ ಹತ್ತು ಹಲವು ಅವತಾರಗಳಲ್ಲಿರುವ ಗಂಡಸರಾದ ನಾವೆಷ್ಟು ಸಭ್ಯರು ಎಂಬ ಅನುಮಾನ ಕಾಡುತ್ತದೆ! ಆ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ, ತನ್ನ ಹೀನ ನಡವಳಿಕೆಗಳನ್ನು ಪ್ರಶ್ನಿಸಿಕೊಳ್ಳುವ ಸಾತ್ವಿಕ ಪ್ರಜ್ಞೆ ನಮ್ಮಲ್ಲಿ ಜಾಗೃತಗೊಂಡದ್ದೇ ಆದರೆ ನಮ್ಮ ಸಮಾಜ 'ಅತ್ಯಾಚಾರ ಮುಕ್ತ' ಸಮಾಜವಾಗುವುದರಲ್ಲಿ ಅನುಮಾನವಿಲ್ಲ. ಅತ್ಯಾಚಾರವೆಂದರೆ ದೈಹಿಕವಾಗಿಯೇ ಆಗಬೇಕೆಂದಿಲ್ಲ, ಮಾನಸಿಕವಾಗಿ, ನೈತಿಕವಾಗಿಯೂ ಆಗಿರಬಹುದು. ಹೆಣ್ಣನ್ನು ಗೌರವ ಭಾವದಿಂದ ನಡೆಸಿಕೊಳ್ಳುವ ಜವಾಬ್ಧಾರಿ ಭಾರತಾಂಬೆಯ ಮಕ್ಕಳೆನಿಸಿಕೊಳ್ಳುವ ನಮ್ಮೆಲ್ಲರ ಮೇಲೂ ಇದೆ. ಗಂಡು ಮಕ್ಕಳ ತಾಯಿಯಂದಿರು ಮೊದಲು ತಮ್ಮ ಮಕ್ಕಳಿಗೆ ಇಂತಹ ಸಾತ್ವಿಕ ಶಿಕ್ಷಣವನ್ನು ಧಾರೆ ಎರೆಯಬೇಕು. 

ಹೀಗೆ ಎಷ್ಟೆಲ್ಲಾ ಸಂಬಂಧಗಳೊಡಗೂಡಿ ಹೆಣ್ಣಿನೊಂದಿಗೆ ಬೆಸೆದುಕೊಂಡ ನಾವು ಮತ್ತೊಬ್ಬ ಹೆಣ್ಣನ್ನು ಕಾಮುಕ ಕಂಗಳಿಂದ ನೋಡುವ ಮೊದಲು, ನಾವೂ ಒಂದು ಹೆಣ್ಣಿನ ಅಪ್ಪನೋ, ಸಹೋದರನೋ, ಗೆಳೆಯನೋ, ಸಂಬಂಧಿಯೋ ಆಗಿರುತ್ತೇವೆಂಬ ಅಲ್ಪ ಪ್ರಜ್ಞೆ ಅಥವಾ ನಮಗೆ ಸಂಬಂಧಪಟ್ಟ ಆ ಹೆಣ್ಣನ್ನೂ ಯಾರದರೂ ಹೀಗೆ ನೋಡಿದ್ದರೆ ಸಹಿಸುತ್ತಿದ್ದೆವೇ? ಎಂಬ ಅರಿವನ್ನು ತಂದುಕೊಂಡರೆ, ಉಗುಳುವ ಮೊದಲೇ ತಪ್ತವಾಗಿಬಿಡುತ್ತದೆ ಕಾಮಾಗ್ನಿ!

ಕೆಲವು ವರ್ಷಗಳ ಹಿಂದ ನನ್ನ ಗೆಳತಿಯೊಬ್ಬಳ ಜೀವನದಲ್ಲಿ ನಡೆದ ಘಟನೆ: ಆಕೆ ಮಾರ್ಕೆಟ್ ಗೆ ಹೋಗಿ ಹಿಂದಿರುಗುವ ಧಾವಂತದಲ್ಲಿ ನಡೆದು ಹೋಗುತ್ತಿರುವುದನ್ನು ಕಂಡ ಒಬ್ಬ 16 ರಿಂದ 17 ವರ್ಷ ವಯಸ್ಸಿನ ಹುಡುಗ ಸೈಕಲ್ ನಲ್ಲಿ ಹಿಂಬಾಲಿಸುತ್ತಿದ್ದನಂತೆ. ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತನ್ನ ವಯಸ್ಸಿಗಿಂತಲೂ ದೊಡ್ಡವಳಾದ ಅವಳನ್ನು ತಬ್ಬಿ ಹಿಡಿಯುವ ಪ್ರಯತ್ನ ಮಾಡಿದನಂತೆ. ಆಕೆಗೆ ಜಂಘಾಬಲವೇ ಉಡುಗಿಹೋಗಿದೆ! ಆಕೆ ಹೇಗೋ ಪ್ರಯತ್ನ ಮಾಡಿ, ತನ್ನ ಕೈಯ್ಯಲ್ಲಿದ್ದ ತರಕಾರಿಗಳನ್ನು ಅವನ ಮೇಲೆ ಕುಕ್ಕಿ, ಕೂಗಿಕೊಂಡು ಪ್ರತಿಭಟಿಸಿದ್ದರಿಂದ ಹೆದರಿ ಸೈಕಲ್ ಮೇಲೇರಿ ಓಡಿಹೋದನಂತೆ. ಆದರೆ ಆ ಘಟನೆಯ ನಂತರ ಆಕೆಯ ಮನಸ್ಥಿತಿ, ಅಬ್ಬಾ ನನಗೀಗಲೂ ಮೈ ಕಂಪಿಸುತ್ತದೆ. ಗಂಡಸರೆಂದರೆ ಆಕೆಗೆ ಅಸಹ್ಯ ಮೂಡಿಬಿಟ್ಟಿತ್ತು! ಎಲ್ಲಾ ಗಂಡಸರೂ ಹಾಗಿರುವುದಿಲ್ಲ, ಅಪ್ಪ, ಅಣ್ಣ, ತಮ್ಮ ಹೀಗೆ ಬಾಂಧವ್ಯ ಹಂಚಿಕೊಂಡವರೂ ಗಂಡಸರಲ್ಲವೇ? ಭಯ ಪಡಬೇಡ ಎಂದರೂ ಆಕೆ ಕೇಳದ ಸ್ಥಿತಿ ತಲುಪಿಬಿಟ್ಟಿದ್ದಳು! ಆಕೆಯ ನಂಬಿಕೆಯ ಮೇಲೆ ಬಲವಾದ ಹೊಡೆತ ಬಿದ್ದಿತ್ತು! ಹೀಗೆ ಹುಡುಕುತ್ತಾ ಹೋದರೆ ಹೆಣ್ಣಿನ ಮೇಲೆ ನಡೆಯುವ ಪೈಶಾಚಿಕ ಮನಸ್ಥಿತಿಯ ರಾಕ್ಷಸರ ದೌರ್ಜನ್ಯಗಳು ಅಸಂಖ್ಯ. ಇವರಿಂದಾಗಿ ಸಭ್ಯರೂ ಮುಖ ಮುಚ್ಚಿಕೊಳ್ಳಬೇಕಾದ ಸ್ಥಿತಿಗೆ ನಮ್ಮ ನಾಗರೀಕ ಸಮಾಜ(!) ಬಂದು ನಿಂತಿದೆ.

ದೆಹಲಿಯಲ್ಲಿ, ಆ ಆರು ಜನರಿಂದಾದ ಅತ್ಯಾಚಾರದಂತಹ ದುಷ್ಕೃತ್ಯ ಕೇವಲ ಆಕೆಯ ಮೇಲಾದ ದೌರ್ಜನ್ಯವಷ್ಟೇ ಅಲ್ಲಾ, ಮಾನವೀಯತೆಯ ಮೇಲಾದ ದೌರ್ಜನ್ಯ, ಸಭ್ಯ ಗಂಡಸರ ಸಭ್ಯತೆಯ ಮೇಲಾದ ದೌರ್ಜನ್ಯ! ಆ ಕುಕೃತ್ಯದಿಂದಾಗಿ ಎಲ್ಲಾ ಗಂಡಸರ ಆತ್ಮೀಯತೆಯೂ ಹಳದಿಗಣ್ಣಿನ ಸೋಗಿನಲ್ಲಿ ಕಾಣುತ್ತಿರುವುದು ದುರಂತ. ಯಾವುದೋ ಒಂದು ದುರ್ಬಲ ಮನಸ್ಥಿತಿಯಲ್ಲಿ ಹೆಣ್ಣಿನ ಜೊತೆ ಕೀಳಾಗಿ ನಡೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ, ನಿಮ್ಮ ಮಗಳೇ ನಿಮ್ಮ ಅಕ್ಕರೆಯ ಸ್ಪರ್ಶವನ್ನು ಕಾಮ ಪ್ರೇರಿತವಾದದ್ದೆಂದು ಅಸಹ್ಯ ಪಟ್ಟುಕೊಂಡರೆ? ನಿಮ್ಮ ಸಹೋದರಿಯೇ ನಿಮ್ಮ ಆತ್ಮೀಯ ಸ್ಪರ್ಶಕ್ಕೆ ಕೆಂಡ ಮುಟ್ಟಿದಂತೆ ಕೈ ಎಳೆದುಕೊಂಡರೆ? ನಿಮ್ಮ ನಲ್ಲೆಗೆ ಹಿತವೆನಿಸಬೇಕಾದ ನಿಮ್ಮ ಸ್ಪರ್ಶ ಕಾದ ಸಲಾಕೆಯಾದರೆ? ನಿಮ್ಮ ತಾಯಿಗೂ ನೀವು ಕಾಮ ಪಿಶಾಚಿಯಂತೆ ಕಂಡರೆ? ನಿಮ್ಮ ಅಮ್ಮನನ್ನೋ, ಸಹೋದರಿಯನ್ನೋ, ಮಗಳನ್ನೋ ನೀವು ಕಾಮುಕ ದೃಷ್ಟಿಯಿಂದ ನೋಡಬಲ್ಲಿರೇ? ನಿಮ್ಮ ಪ್ರಜ್ಞೆ ನಿಮ್ಮ ಕೈಜಾರಿ, ಅಮಾಯಕ ಹೆಣ್ಣು ಮಗಳ ಮೇಲೆರಗುವ ಮುನ್ನ ಒಮ್ಮೆ ಪ್ರಶ್ನಿಸಿಕೊಳ್ಳಿ, ನೀವೆಷ್ಟು ಸಭ್ಯರು? ಒಬ್ಬಳ ತಂದೆಯೋ, ಸಹೋದರನೋ, ಇನಿಯನೋ, ಮಗನೋ ಆಗಿರುವ ನೀವೆಷ್ಟು ಸಭ್ಯರು? ನಿಮ್ಮ ಕುಕೃತ್ಯದಿಂದ ಇಡೀ ನಾಗರೀಕ ಜಗತ್ತಿನ ಸಭ್ಯ ಗಂಡಸರನ್ನೂ ಬೆತ್ತಲೆ ನಿಲ್ಲಿಸುತ್ತಿರುವ ನೀವೆಷ್ಟು ಸಭ್ಯರು? ಒಮ್ಮೆ ಪ್ರಶ್ನಿಸಿಕೊಳ್ಳಿ. 

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

1 comment:

  1. ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಏನು ಮಾಡೋದು? ತಂದೆ ಎನಿಸಿಕೊಂಡ ಪ್ರಾಣಿ ಕೂಡ ತನ್ನ ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವ ಸುದ್ದಿಗಳನ್ನು ನಾವು ಹಲವು ಸಲ ಓದಿದ್ದೇವೆ. ಹಾಗಾದ್ರೆ ಒಂದು ಹೆಣ್ಣು ಮಗು ಯಾರ ಮೇಲೆ ಭರವಸೆ ಇಡಬೇಕು ???? ಇವೆಲ್ಲಕ್ಕೆ ಯಾರನ್ನು ದೂರಬೇಕು, ಯಾರನ್ನು ಹಳಿಯಬೇಕು ಎಂದೇ ಅರ್ಥವಾಗುತ್ತಿಲ್ಲ......ನಮ್ಮ ಕಾನೂನು ಸಹ ಇಂತಹ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸಹ ವಿಷಾದನೀಯ.....ಧರ್ಮಸ್ಥಳ ದಲ್ಲಿ ಇತ್ತೀಚಿಗೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ' ಸೌಜನ್ಯ' ಳಿಗೆ ನ್ಯಾಯ ದೊರಕಿಲ್ಲ....ಕೆಲವು ಘಟನೆಗಳು ಎಲ್ಲರ ಗಮನಕ್ಕೆ ಬಂದರೆ ಅದೆಷ್ಟೋ ಹೆಣ್ಣುಮಕ್ಕಳು ಇಂತಹ ನೋವನ್ನು ಅನುಭವಿಸಿ ಯಾರಿಗೂ ಹೇಳಲಾಗದೆ ಮುಚ್ಚಿಟ್ಟ ಘಟನೆಗಳು ಇರಬಹುದಲ್ಲವೇ ??? ಮನುಷ್ಯನ ನಡವಳಿಕೆ ಕ್ರೂ ರ ಪ್ರಾಣಿಗಳಿಗಿಂತ ಕಡೆಯಾದ ರೀತಿಯಲ್ಲಿ ವರ್ತಿಸುತ್ತಿರುವುದು ನಿಜಕ್ಕೂ ವಿಷಾದನೀಯ....ವಿದ್ಯಾವಂತ ರೆನಿಸಿಕೊಂಡ ಯುವಕರು ಸಹ ಇಂತಹ ಅಮಾನವೀಯ ಕೃತ್ಯಗಳಿಗೆ ಕೈಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ....

    ಸಕಾಲಿಕ ಲೇಖನ....ಚೆನ್ನಾಗಿದೆ ಪ್ರಸಾದ್...

    ReplyDelete