ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday 13 February 2012

ಗೆಳತಿಗೊಂದು ಪತ್ರ, ಪ್ರೇಮದ ಗುಂಗಲ್ಲಿ


ನಲ್ಮೆಯ ಗೆಳತಿ,
ನಿನ್ನ ನೆನಪುಗಳು ಒತ್ತರಿಸಿ ಬರುವಾಗ ನಿನಗೇನಾದರು ಉಡುಗೊರೆ ಕೊಡಬೇಕೆಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂತು, ಅಯ್ಯೋ ನಾನೆಂತ ಪ್ರೇಮಿ? ಪ್ರೀತಿಸಿ ನಾಲ್ಕು ವರ್ಷಗಳಾಗಿವೆ ನಾನು ನಿನಗಾಗಿ ಒಂದೂ ಪ್ರೇಮಪತ್ರವನ್ನು ಬರೆಯಲಿಲ್ಲವಲ್ಲ. ಇಂದು ಫೆಬ್ರವರಿ ೧೪, ಅದೇನೊ ’ಪ್ರೇಮಿಗಳ ದಿನ’ವಂತೆ. ಕೆಲವರು ’ಫೆಬ್ರವರಿ ೧೪ ರಂದು ಪ್ರೇಮಿಗಳ ದಿನವೆಂದು ಆಚರಿಸಕೂಡದು ಅದು ಪಾಶ್ಚಾತ್ಯ ಅನುಕರಣೆ. ನಿಜವಾದ ಪ್ರೇಮಿಗಳಿಗೆ ದಿನವೂ ಪ್ರೇಮೋತ್ಸವವೆ’ ಎಂದು ಬೊಂಬಡ ಬಜಾಯಿಸುತ್ತಾರೆ. ಇನ್ನೂ ಕೆಲವರು ’ನಮ್ಮ ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಥಾನವೇ ಇರುವುದಿಲ್ಲ, ಕೊಡಲು ನಮಗೆ ಸಮಯವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರೇಮವನ್ನು ಮಾತ್ರ ಆಚರಿಸಲು, ಎಲ್ಲೆಂದರಲ್ಲಿ ಕೆಂಪು ಗುಲಾಬಿಗಳು ಮತ್ತು ಬಲೂನ್ ಗಳಿಂದ ಇಡೀ ಪ್ರಪಂಚ ತನ್ನನ್ನೇ ತಾನು ಸಿಂಗರಿಸಿಕೊಂಡು ಹಬ್ಬದಂತೆ ಕಣ್ಣಿಗಾನಂದ ನೀಡುವ ’ಪ್ರೇಮಿಗಳ ದಿನ’ ದ ಆಚರಣೆ ಬೇಡವೇಕೆ?’ ಎಂದು ಜಾಗಟೆ ಬಾರಿಸುತ್ತಾರೆ. ಬೊಂಬಡವಾದರೂ ಸರಿಯಾಗಲಿ, ಜಾಗಟೆಯಾದರೂ ಸರಿಯಾಗಲಿ ನಮಗೇಕೆ ಅವುಗಳ ಗೌಜು ಗದ್ದಲ ಅಲ್ಲವೆ? ನಾನಂತು ತೀರ್ಮಾನಿಸಿದೆ ನಿನಗೊಂದು ಪ್ರೇಮಪತ್ರ ಬರೆದು ಮತ್ತೊಮ್ಮೆ ಪ್ರೇಮಿಯಾಗುತ್ತೇನೆ.

ನನ್ನನ್ನು ನಿನ್ನ ತೋಳ ತೆಕ್ಕೆಯಲ್ಲಿ ಎಳೆದುಕೊಂಡದ್ದು ಬಸ್ ಪ್ರಯಾಣದಲ್ಲಿನ ನಮ್ಮ ಮೊದಲ ಭೇಟಿ. ಅದ್ಯಾವ ಕಾರಣಕ್ಕೆ ನಿನ್ನನ್ನು ಮೋಹಿಸಿದೆನೊ ನಾನು? ಅಂತಹ ಸುರಸುಂದರಿಯೂ ನೀನಲ್ಲ, ಕೋಗಿಲೆಯ ಕಂಠವೂ ಇಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ, ನಾನು ಹಿಂದೆ ಯಾವ ಹುಡುಗಿಯರನ್ನೂ ಕಣ್ಣೆತ್ತಿಯೂ ನೋಡಿರಲಿಲ್ಲ. ಅವರಾಗವರೆ ಮಾತನಾಡಿಸಿ ಬಂದರೆ ಪ್ರಶ್ನೋತ್ತರಗಳಂತಿರುತ್ತಿದ್ದವು ನನ್ನ ಸಂಭಾಷಣೆಗಳು. ಅದ್ಯಾವ ಮೋಡಿ ಇದೆ ನಿನ್ನಲ್ಲಿ. ನಿನ್ನ ಕುಡಿ ನೋಟಕ್ಕೆ ಮೋಹಿತನಾಗಿಬಿಟ್ಟೆ. ಆ ಕಣ್ಣೊಳಗಿನ ಪ್ರೀತಿಗೆ ಪರವಶನಾಗಿಬಿಟ್ಟೆ. ನನಗೂ, ನಿನಗೂ ಅದೆಷ್ಟು ವ್ಯತ್ಯಾಸವಿತ್ತು. ನಾನೋ ಮಾತು ಮರೆತ ಮಿತ ಭಾಷಿ, ನೀನು ಗಂಟೆಗಟ್ಟಲೆ ಮಾತನಾಡಬಲ್ಲ ಮಾತಿನಮಲ್ಲಿ. ’ಈ ಪ್ರೀತಿಯಲ್ಲಿ ನಮಗೆ ಉಳ್ಟಾ ಇರುವ ಕ್ಯಾರೆಕ್ಟರ್ ಗಳೆ ಇಷ್ಟ ಆಗ್ತವಂತೆ’. ಹಾಗಂತ ಪಂಚರಂಗಿಯಲ್ಲಿ ನಿಧಿ ಸುಬ್ಬಯ್ಯ ಹೇಳುತ್ತಾಳೆ, ಅದು ನಿಜ ಎನಿಸುತ್ತದೆ. ಇದೇನಿದು ಹುಡುಗ ಟ್ರ್ಯಾಕ್ ಬದಲಿಸುತ್ತಿದ್ದಾನೆ ಅಂತ ಕೋಪ ಮಾಡ್ಕೊಳ್ಬೇಡ ಮಾರಾಯ್ತಿ, ಅವಳನ್ನು ನಿನ್ನ ಮುಂದೆ ನೀವಾಳಿಸಿ ಬಿಸಾಕ್ತೇನೆ.

ಆ ಭೇಟಿಯಿಂದ ಮೊದಲ್ಗೊಂಡ ನಮ್ಮ ಪರಿಚಯ, ಆತ್ಮೀಯತೆಗೆ ತಿರುಗಿ ಸುಂದರ ಬಂಧ ಜನ್ಮ ತಾಳಿತ್ತು. ನಾನು ಎಷ್ಟೋ ಸಲ ಇದು ಕೇವಲ ಸ್ನೇಹ ಎಂದು ನನಗೇ ನಾನು ಹೇಳಿಕೊಂಡರೂ ಕೇಳದ ನನ್ನ ಮನಸ್ಸು ಪ್ರೀತಿಯ ಧಾವಂತಕ್ಕೆ ಬಿದ್ದಿತ್ತು. ನಾನೇನು ಮಾಡಲಿ ನನ್ನ ಮನಸ್ಸಿನ ಕಡಿವಾಣ ನನ್ನ ಹೃದಯದ ಕೈಯಲ್ಲಿತ್ತು. ನನ್ನ ಹೃದಯ ನಿನ್ನೊಳಗಿತ್ತು. ದಿನವೂ ಹರಟುತ್ತಿದ್ದೆವು ’ಊಟಕ್ಕಿಲ್ಲದ, ಉಪ್ಪಿನ ಕಾಯಿಗೆ ಬರದ ಕಾಡು ಹರಟೆ’ ಇಬ್ಬರಿಗೂ ಒಬ್ಬರಿಗೊಬ್ಬರ ಸಾನಿಧ್ಯ ಬೇಕಿತ್ತು. ನಾವಿಬ್ಬರೂ ಅಂದು ರಸ್ತೆ ದಾಟುವಾಗ ನಾನು ನಿನ್ನ ಮೊದಲ ಪ್ರೇಮಿ ಆಟೋ ರಿಕ್ಷಾ(ಕಾರಣ ನಿನಗೆ ಗೊತ್ತು!) ಬರುವುದನ್ನು ಗಮನಿಸದೆ ಮುನ್ನುಗ್ಗುವಾಗ ನೀನು ನನ್ನ ಕೈಹಿಡಿದು ಬರಸೆಳೆದುಕೊಂಡೆಯಲ್ಲಾ ಆ ಮೊದಲ ಸ್ಪರ್ಶ, ಈ ಪತ್ರ ಬರೆಯುವಾಗಲು ನನ್ನ ಬಲ ತೋಳನ್ನು ನೇವರಿಸಿಕೊಳ್ಳುತ್ತಿದ್ದೇನೆ. ಈಗ ನೀನೇನಾದರು ನನ್ನ ಬಳಿಯಿದ್ದಿದ್ದರೆ ಆ ಮುದ್ದಾದ ಕೈ ಬೆರಳುಗಳನ್ನಿಡಿದು ಮುದ್ದಿಸುತ್ತಿದ್ದೆ. ಹೀಗೆ ಪ್ರೀತಿಯ ಮೊದಲ ಮೆಟ್ಟಿಲೇರಿದವನಿಗೆ ಕಾಯುವಂತೆ ಮಾಡಿದ್ದು ಆ ಹಾಳಾದ ಸೆಮಿಸ್ಟರ್ ಹಾಲಿಡೇಸ್. ಒಂದೊಂದು ನಿಮಿಷಗಳನ್ನೂ, ಒಂದೊಂದು ಯುಗಗಳೆಂಬಂತೆ ಕಳೆದಿದ್ದೇನೆ. ಎರಡು ತಿಂಗಳು ನಿನ್ನನ್ನು ನೋಡದೆ, ಮಾತನಾಡದೆ ಕಳೆದೆನೆಂದರೆ ಸೋಜಿಗವಾಗುತ್ತದೆ. ಹೆಚ್ಚೂ ಕಡಿಮೆ ಹುಚ್ಚೇ ಹಿಡಿದಿತ್ತು.

ಎರಡು ತಿಂಗಳ ನಂತರ ಮತ್ತೆ ಕಾಲೇಜ್ ರೀ ಓಪನ್ ಆದದ್ದು ನಿಟ್ಟುಸಿರು ಬಿಡುವಂತೆ ಮಾಡಿತ್ತು. ದಿನವೂ ನಿನ್ನನ್ನು ಹುಡುಕುತ್ತಿದ್ದೆ, ನಿನ್ನನ್ನು ಕಂಡೊಡನೆ ದಿನದ ಉತ್ಸಾಹ ನನ್ನ ಮೈಯೊಳಗೆ ಪ್ರವಹಿಸುತ್ತಿತ್ತು. ಆಗ ನಮ್ಮ ಆತ್ಮೀಯತೆಯ ನಡುವೆ ತೂರಿದವಳೆ ’ಅನನ್ಯಾ ಶರ್ಮ’. ನನಗೆ ಮೊದಲು ಹೀಗೆ ನನ್ನನ್ನು ಅನನ್ಯ ಎಂದುಕೊಂಡು ಮೊಬೈಲ್ ನಲ್ಲಿ ಕಾಡುತ್ತಿರುವುದು ನೀನೇ ಎಂದು ಅನುಮಾನ ಬರುತ್ತಿತ್ತು. ಯಾವಾಗ ಅದು ನೀನಲ್ಲಾ ಎಂದು ತಿಳಿಯಿತೊ ಆಗ ನಮ್ಮಿಬ್ಬರ ನಡುವೆ ಯಾರೋ ತೂರಲು ಪ್ರಯತ್ನಿಸುತ್ತಿದ್ದಾರೆ. ಅವರು ನಿನ್ನನ್ನು ಕಸಿದೊಯ್ದುಬಿಟ್ಟರೆ ಎಂಬ ಭಯ ಕಾಡಲು ಶುರುವಾಯ್ತು. ಆದ್ದರಿಂದಲೆ ನಮ್ಮಿಬ್ಬರ ಇಂಜಿನಿಯರಿಂಗ್ ಮುಗಿದ ನಂತರ ನಿವೇದಿಸಿಕೊಳ್ಳಬೇಕೆಂದುಕೊಂಡಿದ್ದ ನನ್ನ ಪ್ರೇಮದ ಕಟ್ಟೆಯನ್ನು ತೆರೆದು ಭಾವನೆಗಳನ್ನು ನಿನ್ನೆದುರು ಹರಿಯಬಿಟ್ಟೆ. ನೀನು ನನ್ನ ನಿವೇದನೆಯನ್ನು ಕಂಡು ದಿಗ್ಭ್ರಾಂತಳಾದಂತೆ ಕಂಡುಬಂದೆ. ’ನೀನು ನನ್ನ ಒಳ್ಳೆಯ ಗೆಳೆಯ, ಹಾಗೇ ಇರು’ ಎಂದು ಚುಟುಕಾಗಿ ಉತ್ತರಿಸಿದ್ದೆ. ಅಂದು ಕ್ಯಾಂಟೀನ್ ನಲ್ಲಿ ನೀನು ಪೂರಿ ತಿಂದದ್ದಕ್ಕೆ ಕೊಟ್ಟ ಬಿಲ್ ನಲ್ಲಿ ಮಿಗಿಸಿಕೊಂಡ ಐದು ರುಪಾಯಿ ನಾಣ್ಯವನ್ನು ಇನ್ನೂ ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದೇನೆ, ಆ ದಿನದ ಸವಿ ನೆನಪಿಗಾಗಿ.

’ಪ್ರೀತಿ ಕಾಡುವುದರಿಂದ ಹುಟ್ಟುವುದಲ್ಲ, ತಾನೇ ತಾನಾಗಿ ಹುಟ್ಟಬೇಕು’ ಎಂಬ ಅರಿವಿದ್ದ ನಾನು ನಿನ್ನನ್ನು ಪೀಡಿಸದೆ ಸ್ನೇಹಿತನಾಗಿರಲು ಪ್ರಯತ್ನಿಸಿ ಸೋತಿದ್ದೆ, ಅದರೆ ನಿನ್ನೆದುರು ಅದನ್ನು ಹೇಳಿಕೊಳ್ಳದೆ ಕೇವಲ ಸ್ನೇಹಿತನಂತೆ ನಟಿಸುತ್ತಿದ್ದೆ. ಅದಾದ ಎರಡು ತಿಂಗಳುಗಳ ನಂತರ ನೀನೇ ಬಂದು ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದೆ. ಆ ಕ್ಷಣದಲ್ಲಿ ನಾನನುಭವಿಸಿದ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಗತ್ತಿನಲ್ಲಿ ಏನನ್ನೋ ಗೆದ್ದೆನೆಂಬ ಪುಳಕ ಮನಸ್ಸಿಗೆ ಹಿತವನ್ನು ನೀಡಿತ್ತು. ಮುಂದಿನ ಕೆಲವು ತಿಂಗಳುಗಳು ನಾನು ನನ್ನ ಕನಸ್ಸಿನಲ್ಲೂ ಮರೆಯಲಾಗದ ಸುಂದರ ಸುಮಧುರ ಕ್ಷಣಗಳು. ಪ್ರೀತಿ ಎಷ್ಟು ಸುಂದರ ಎಂಬುದನ್ನು ತೋರಿಸಿಕೊಟ್ಟ ಪ್ರೇಮ ದೇವತೆ ನೀನು. ನಾನು ಒಬ್ಬರನ್ನು ಜೀವಕ್ಕಿಂತಲು ಹೆಚ್ಚಾಗಿ ಪ್ರೀತಿಸಬಲ್ಲೆನೆಂಬುದನ್ನು ಅರಿವಿಗೆ ತರಿಸಿದ ಕ್ಷಣಗಳವು. ನಾನು ಯಾವಾಗಲಾದರು ನಿಸ್ತೇಜನಾಗಿ ಕೂತಾಗ ಸುಮ್ಮನೆ ಆ ನೆನಪುಗಳನ್ನು ಮೆಲುಕು ಹಾಕಿದರೂ ಸಾಕು, ಈಗಲೂ ಮೈ ಮನಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ನವೋಲ್ಲಾಸ ಚಿಮ್ಮುತ್ತದೆ.

ನಂತರದ ದಿನಗಳಲ್ಲಿ ನನ್ನ ಅಪ್ರಬುದ್ಧತೆಯೊ ಏನೊ, ಕೆಲವು ಒತ್ತಡಗಳಿಗೆ ಸಿಕ್ಕು ನಾನೇ ಮಾಡಿಕೊಂಡ ತಪ್ಪಿಗೆ ನಿನ್ನನ್ನು ಹೊಣೆ ಮಾಡಿದೆ. ನಿನ್ನನ್ನು ತುಂಬಾ ನಿರ್ಲಕ್ಷಿಸಿದೆ ಮತ್ತು ನಿನ್ನ ಮನಸ್ಸನ್ನು ನೋಯಿಸಿದೆ ಎನಿಸುತ್ತಿದೆ. ನಿನಗೆ ಆ ದೋಷಾರೋಪಣೆ ಹೊರೆಯಾಯ್ತೆಂದು ಕಾಣಿಸುತ್ತದೆ. ಆದ್ದರಿಂದಲೆ ನೀನು ನಿನ್ನದೇ ಕಾರಣಗಳನ್ನು ಕೊಟ್ಟು ದೂರ ಸರಿಯಲಾರಂಭಿಸಿದೆ. ನನಗೂ ಸ್ವಲ್ಪ ಅಹಂ ಇತ್ತೆನಿಸುತ್ತದೆ, ಹೋದರೆ ಹೋಗಲಿ ಎಂದು ಸುಮ್ಮನಿದ್ದುಬಿಟ್ಟೆ. ಈಗ ನಿನ್ನ ನೆನಪುಗಳು ಮತ್ತೆ ಕಾಡಲಾರಂಭಿಸಿವೆ. ನಡೆದ ಎಲ್ಲಾ ತಪ್ಪುಗಳಿಗೆ ಕ್ಷಮೆ ಕೋರುತ್ತಾ ಮತ್ತೆ ನನ್ನನ್ನು ಪರಿಚಯಿಸಿಕೊಳ್ಳುತ್ತಿದ್ದೇನೆ. ’ಕಳೆದು ಹೋದವಳ ಅರಸುತ್ತಾ ಕಳೆದು ಹೋದವನು ನಾನು’, ಹೆಸರಲ್ಲೇನಿದೆ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಮತ್ತೆ ಹಿಂತಿರುಗೆ ಚೆಲುವೆ, ನಾನು ನನ್ನನ್ನು ಕಂಡುಕೊಳ್ಳಬೇಕಿದೆ.
ಇಂತಿ ನಿನ್ನ ಗೆಳೆಯಾ...

- ಪ್ರಸಾದ್.ಡಿ.ವಿ.

ಸಮತೋಲನ



ಹಕ್ಕಿಯೊಂದು ಕೊಕ್ಕ ಚಾಚಿ
ಕಾಳೊಂದನು ಕುಕ್ಕಿ ಹೆಕ್ಕಿ
ಗಂಟಲೊಳಗಿನೆಂಜಿಲುನಿಸಿ
ಗುಟುಕಿರಿಸಿರೆ
ಕಾಳ ಜೀವ ಹಾರಿ ಹೋಯ್ತು,
ಸಸಿಯ ಹುಟ್ಟು ಕಮರಿ ಹೋಯ್ತು
ಹಕ್ಕಿಯ ಹಸಿವಿಗೆ..!

ಹಸಿದ ಹಾವು ಅಹಾರವರಸಿ
ಮರದಲಿದ್ದ ಗೂಡನ್ಹುಡುಕಿ
ಅದರಲಿದ್ದ ಮೊಟ್ಟೆ ಕುಕ್ಕಿ
ಸಾರ ಹೀರಿರೆ,
ಹಸುಳೆ ಹಕ್ಕಿ ಹತ್ಯೆಯಾಯ್ತು,
ಹತ್ಯೆಗೆ ಹತ್ಯೆ ಜೊತೆಯಾಯ್ತು,
ಹಾವಿನ ಹಸಿವಿಗೆ..!

ಗಿಡುಗವೊಂದು ಹೊಂಚುಹಾಕಿ
ತೆವಳುತಿದ್ದ ಉರುಗನ ಮೇಲೆ
ತನ್ನೆರಡು ಕಾಲ ಮೀಟಿ
ಹೊತ್ತು ಹೋಯ್ದಿರೆ,
ಹಾವು ಕೂಡ ಹತ್ಯೆಯಾಯ್ತು,
ಕಾಲನಾಟ ಏರಿಯಾಯ್ತು,
ಗಿಡುಗನ ಹಸಿವಿಗೆ..!

ಮಳೆಯೊಂದಿಗೆ ಮಿಂಚು ಬಂತು
ಮಿಂಚ ವಿದ್ಯುತ್ ಸ್ಪರ್ಷ ತಂತು
ಸ್ಪರ್ಷ ತಗುಲಿ ಗಿಡುಗ ಸತ್ತು
ಪಯಣ ಮುಗಿಸಿರೆ,
ಸತ್ತ ಗಿಡುಗ ಭುವಿಗೆ ಬಿತ್ತು,
ಬೆಳೆವ ಸಸಿಗೆ ಸತುವಾಯ್ತು,
ಹೊಸ ಬೀಜದುಗಮಕೆ..!

ಸಾವಿಗೊಂದು ಸಾವಿನ್ಹುತ್ತ,
ಹುಟ್ಟಿಗೊಂದು ಹುಟ್ಟಿಸುತ್ತಾ,
ತನ್ನ ಇರುವ ತೋರಿಸುತ್ತಾ,
ಜೀವಗಳನ್ನಣಕಿಸುತ್ತಾ,
ನಿಸರ್ಗ ಹಿಡಿದ ಬಿಗಿ ಹಿಡಿತ,
ಇದು ಸಮತೋಲನ,
ಪ್ರಕೃತಿಯ ಸಮತೋಲನ..!

- ಪ್ರಸಾದ್.ಡಿ.ವಿ.

Wednesday 8 February 2012

ಯುವ ಮನಸ್ಸಿನ ಹತ್ತು ಹಲವು ಮುಖಗಳು - 2

ಅವನು, ಅವಳು ಮತ್ತು ಪ್ರೀತಿ
-------------------------------

ಹರೆಯ ಎಂಬುದೇ ಹೀಗೆ, ಯಾವುದೇ ಪ್ರತ್ಯೇಕ ವ್ಯಾಖ್ಯಾನಕ್ಕೆ ದಕ್ಕದ ನಜೂಕಿನ ವಿಷಯ. ಅದರ ಅರ್ಥಾನ್ವೇಷಣೆಗಳು ತೆರೆದಿಟ್ಟಷ್ಟೂ ವಿಸ್ತಾರ, ಸಂವೇಧನೆಗೆ ಸಿಕ್ಕಷ್ಟೂ ನಿಗೂಢ.

ಅವನೊಬ್ಬ ಸಾಮಾನ್ಯ ಹುಡುಗ, ಹೆಸರು ಆದಿತ್ಯ. ತಂದೆ ಸರ್ಕಾರಿ ಕಛೇರಿಯಲ್ಲಿ ಹೆಡ್ ಕ್ಲಾರ್ಕ್, ತಾಯಿ ಸಾಮಾನ್ಯ ಗೃಹಿಣಿ. ಒಬ್ಬನೇ ಮಗನಾದ ಕಾರಣ ಮನೆಯ ರಾಜಕುಮಾರನಂತೆ ಬೆಳೆಯುತ್ತಿದ್ದ. ಮೊದ ಮೊದಲು ಈ ಅತಿಯಾದ ಪ್ರೀತಿ ಮತ್ತು ಕಾಳಜಿಗಳು ಹಿತವೆನಿಸಿದರೂ ಅವನು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಅವುಗಳೆಲ್ಲಾ ಉಸಿರುಗಟ್ಟಿಸುವಂತೆ ಭಾಸವಾಗುತ್ತಿತ್ತು. ಈ ಹರೆಯದ ಪ್ರಮುಖ ಲಕ್ಷಣವೆಂದರೆ ತನ್ನ ಅಪ್ಪ-ಅಮ್ಮನ ಮಾತುಗಳು ಮತ್ತು ಕಾಳಜಿ ತಂತಿ ಬೇಲಿಗಳಂತೆ ಭಾಸವಾಗುತ್ತವೆ. ಆ ಬೇಲಿಯನ್ನು ಹಾರಬೇಕೆನಿಸುತ್ತದೆ. ಮತ್ತು ಹೆಚ್ಚು ಸಮಯವನ್ನು ಏಕಾಂತದಲ್ಲಿ ಕಳೆಯುವಂತೆ ಪ್ರೇರೇಪಿಸುತ್ತದೆ. ಬೇಕಾಗಿಯೇ ದಕ್ಕಿಸಿಕೊಂಡ ಏಕಾಂತವನ್ನು ಓದು ಸೆಳೆದಿತ್ತು. ಹಾಗಂತ ಪಠ್ಯದ ಓದಲ್ಲ, ಬದಲಾಗಿ ಪ್ರೀತಿ-ಪ್ರೇಮದ ಬಗ್ಗೆ ಯಾವುದೇ ನಿಯತಕಾಲಿಕೆಗಳಲ್ಲಿ ಬಂದಿದ್ದರೂ ತುಂಬಾ ಅಸ್ಥೆ ವಹಿಸಿ ಓದುತ್ತಿದ್ದ..! ಆಗ ಅವನನ್ನು ಆಕರ್ಷಿಸಿದ್ದು ’ಓ ಮನಸೇ’ ಅದರಲ್ಲಿ ಬರುತ್ತಿದ್ದ ಲೇಖನಗಳಲ್ಲಿನ ಪ್ರೀತಿಯ ನವ್ಯ ವ್ಯಾಖ್ಯಾನಗಳು ಅವನಲ್ಲಿ ಕುತೂಹಲಗಳನ್ನು ಹುಟ್ಟಿಸುತ್ತಿದ್ದವು.

ನಿವೇಧಿತಾ ಆದಿತ್ಯನ ಸಹಪಾಠಿ, ಮಾತೂ ಹೆಚ್ಚು, ಪಲುಕೂ ಹೆಚ್ಚು. ಆದಿತ್ಯ ಅವನಿಗೇ ಅರಿವಿಲ್ಲದೆ ಅವಳೆಡೆಗೆ ಸರಿಯುತ್ತಿದ್ದ. ಅವಳೊಂದಿಗೆ ಬೆರೆಯಲು ಕಾರಣಗಳನ್ನು ಹುಡುಕುತ್ತಿದ್ದ. ಇವರ ಆತ್ಮೀಯತೆಯನ್ನು ಗಮನಿಸಿದ ಆದಿತ್ಯನ ತಾಯಿಯ ಮನಸ್ಸಿನಲ್ಲಿ ಅವ್ಯಕ್ತವಾದ ಭಯ ಮೂಡುತ್ತಿತ್ತು. ಅವರು ಇವರಿಬ್ಬರ ಆತ್ಮೀಯತೆಗೆ ಬೇಲಿಯನ್ನು ಹಾಕಲು ಪ್ರಯತ್ನಿಸಿದರು. ಇದೇ ಪೋಷಕರು ಮಾಡುವ ತಪ್ಪು, ಅವರು ಈ ರೀತಿಯ ವಿಚಾರಗಳಲ್ಲಿ ಅತಿಯಾಗಿ ಮೂಗು ತೂರಿಸದಿದ್ದರೆ ಅದು ಆಕರ್ಷಣೆಗಷ್ಟೇ ಸೀಮಿತವಾಗಿ, ಸ್ನೇಹವಾಗಿಯೇ ಉಳಿಯುವ ಸಾಧ್ಯತೆಯುಂಟು. ಆದರೆ ಪೋಷಕರು ಆ ವಿಷಯಗಳ ಮಧ್ಯೆ ಪ್ರವೇಶಿಸಿದರೆ ಆ ಆಕರ್ಷಣೆ ಪ್ರೀತಿಯಾಗಿಯೇ ತೀರುತ್ತದೆ. ಆದಿತ್ಯ ಈಜು ಬರದಿದ್ದರೂ ಸಹ ಆಳ ನೋಡುವ ದುಸ್ಸಾಹಸಕ್ಕೆ ಕೈ ಹಾಕಿದ್ದ. ಇವನೋ ಪ್ರೀತಿಯ ಆಳ ತಿಳಿಯದವನು, ಅವಳು ಪ್ರೀತಿ-ಸ್ನೇಹಗಳಿಗೆ ವ್ಯತ್ಯಾಸವೇ ತಿಳಿಯದವಳು. ಇಬ್ಬರೂ ಪ್ರೀತಿಯಲ್ಲಿ ಬಿದ್ದರು, ಸ್ವಯಂಕೃತ ಅಪರಾಧ..! ಮೊದಲು ಪ್ರೀತಿಯಲ್ಲಿ ಬೀಳುವವರಿಗೆ ಅದರ ಬಣ್ಣ ಆಕರ್ಷಣೀಯ ಎನಿಸುತ್ತದೆ. ಆದರೆ ಅದು ಮಾಸಿ ಹೋಗುತ್ತದೆ ಎಂಬ ಕಲ್ಪನೆಯೂ ಇರುವುದಿಲ್ಲ. ಇನ್ನು ಪ್ರೀತಿಯಲ್ಲಿ ಅನುಭವ ಪಡೆದವರನ್ನೂ ಮತ್ತೆ ಪ್ರೀತಿ ನುಂಗೇ ನುಂಗುತ್ತದೆ. ಏಕೆಂದರೆ ಮಾಸಿದ ಹಳೇ ಅಂಗಿಗೆ ಹೊಸ ಬಣ್ಣ ಬಳಿದು ಹಳೆಯ ಕೆರೆತಗಳನ್ನು ಮುಚ್ಚಿ ಹಾಕಿಕೊಳ್ಳುವ ತವಕ. ಏನಾದರಾಗಲಿ, ಯಾರಾದರಾಗಲಿ ಪ್ರೀತಿಗೆ ಬಲಿ ಶತ ಸಿದ್ಧ.

ಪೋಷಕರ ಅಡೆತಡೆಗಳ ನಡುವೆಯೂ, ’ನಾವಿಬ್ಬರು ಸ್ನೇಹಿತರಷ್ಟೆ’ ಎಂದು ಹೇಳಿಕೊಂಡು ಎಗ್ಗಿಲ್ಲದೆ ಸಾಗಿತ್ತು ಅವರಿಬ್ಬರ ಪ್ರೀತಿ. ಸ್ಕೂಲ್ ನಲ್ಲಿ ಅವರಿಬ್ಬರ ಗಪ್-ಚುಪ್ ಗಳೇನು, ಕ್ಲಾಸಿನಲ್ಲಿ ಒಬ್ಬರ ಕೈಯನ್ನು ಒಬ್ಬರು ಹಿಡಿದು ಕುಳಿತುಕೊಳ್ಳುವುದೇನು.. ಎಲ್ಲರ ಕಣ್ಣುಗಳನ್ನೂ ಕುಕ್ಕುತ್ತಿದ್ದ ಪ್ರಣಯ ಪಕ್ಷಿಗಳಾಗಿದ್ದರು. ಮೆಸೇಜಿಂಗ್ ನಲ್ಲಿ ಕಂಬೈನ್ಡ್ ಸ್ಟಡಿ ಮಾಡ್ತೇವೆ ಎಂದೇಳಿ ಮಧ್ಯರಾತ್ರಿಯವರೆಗೂ ಸಂದೇಶಗಳು ಇಬ್ಬರ ಮೊಬೈಲ್ ಗಳನ್ನೂ ಎಡತಾಕುತ್ತಿದ್ದವು. ಮಿಸ್ಡ್ ಕಾಲ್ ಗಳೂ ಎಗ್ಗಿಲ್ಲದೆ ಸಾಗಿದ್ದವು. ತಕ್ಷಣ ಪ್ರತಿಕ್ರಿಯೆ ನೀಡದಿದ್ದರೆ ಅದು ಮಾರಾ-ಮಾರಿಯಲ್ಲಿ ಕೊನೆಯಾಗುತ್ತಿತ್ತು. ಹೀಗೆ ಶಾಲಾ ಪ್ರವಾಸದಲ್ಲಿ ಇವರಿಬ್ಬರ ಸಲುಗೆಯನ್ನು ಗಮನಿಸಿದ ಅವರ ಹಿಂದಿ ಶಿಕ್ಷಕರಾದ ಶ್ರೀಧರ್ ಅವರಿಬ್ಬರನ್ನೂ ಕರೆದು ’ಈ ವಯಸ್ಸಿನಲ್ಲಿ ಪ್ರೀತಿ-ಪ್ರೇಮಗಳ ಬಲೆಯಲ್ಲಿ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ತಿಳಿಹೇಳಿ. ನಿವೇಧಿತಾಳಿಂದ ಆದಿತ್ಯನ ಕೈಗೆ ರಾಖಿ ಕಟ್ಟಿಸಿಬಿಟ್ಟರು. ಇನ್ನುಮುಂದೆ ನೀವಿಬ್ಬರು ಅಣ್ಣ-ತಂಗಿಯರೆಂದು ಹರಸಿ ಕಳುಹಿಸಿಕೊಟ್ಟರು. ಇದು ಅವರಿಬ್ಬರಿಗೂ ಜೀರ್ಣಿಸಿಕೊಳ್ಳಲಾಗದ ವಿಷಯವಾಯಿತು. ಅವರ ಪ್ರೀತಿ ಈ ಪರಿಸ್ಥಿತಿ ಎಂಬ ಸ್ಪೀಡ್ ಬ್ರೇಕರ್ ಗೆ ಸಿಕ್ಕಿ ಆಕ್ಸಿಡೆಂಟ್ ಆಗಿತ್ತು. ನಂತರದಲ್ಲಿ ತಕ್ಕ ಮಟ್ಟಿಗೆ ಓದಿ ಇಬ್ಬರೂ ಹತ್ತನೆ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಅವರ ಮನೆಗಳಲ್ಲಿ ಮಕ್ಕಳು ಸರಿ ದಾರಿಗೆ ಬಂದರು ಎಂದು ನಿಟ್ಟುಸಿರು ಬಿಡುವಂತಾಗಿತ್ತು.

ನಂತರ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರಿಂದ ಒಬ್ಬರಿಗೊಬ್ಬರು ಸಂಧಿಸುವುದು ಕಡಿಮೆಯಾಯಿತು. ಸಂಧಿಸಿದರೂ ಮಾತಿಲ್ಲ, ಕಥೆಯಿಲ್ಲ. ಸಂದೇಶಗಳಂತೂ ತಮ್ಮ ಗುರಿ ಮರೆತಿದ್ದವು. ಹೀಗಿದ್ದಾಗ ಆದಿತ್ಯನ ಮೊಬೈಲ್ ತೆಗೆದುಕೊಂಡ ಅವನ ಸ್ನೇಹಿತ ನಿವೇಧಿತಾಳಿಗೆ ಹುಡುಗಾಟಿಕೆಗೆಂದು ಕಳುಹಿಸಿದ ’ಐ ಲವ್ ಯೂ ನಿವೀ..’ ಎಂಬ ಸಂದೇಶ ಅವರಿಬ್ಬರನ್ನೂ ಮತ್ತೆ ಮಾತನಾಡುವಂತೆ ಮಾಡಿತ್ತು. ಗೆಳೆಯ ಮಾಡಿದ ಅಚಾತುರ್ಯವನ್ನು ವಿವರಿಸಲು ಅವನು ನೆನಪುಗಳ ಮೆಲುಕು ಹಾಕುತ್ತಾ ಅವಳು ಮತ್ತೆ ಪ್ರೀತಿಯ ತೆಕ್ಕೆಯಲ್ಲಿ ಬಿದ್ದರು. ಇಬ್ಬರೂ ತಮ್ಮ ಪೊಸೆಸ್ಸಿವ್ ನೆಸ್ ನಿಂದಾಗಿ ಆಗಾಗ ಜಗಳ ಮಾಡಿಕೊಳ್ಳಲು ಶುರು ಮಾಡಿದ್ದರು. ಸ್ನೇಹದ ಪರಿಧಿಯ ಅರಿವಿರದ ನಿವೇಧಿತ ಬೇರೆ ಹುಡುಗರೊಂದಿಗೆ ಕೈ ಕೈ ಹಿಡಿದು ಸುತ್ತುತ್ತಿದ್ದಳು. ಆದಿತ್ಯ ಇದನ್ನು ಅವಳಿಗೆ ಎಷ್ಟು ತಿಳಿ ಹೇಳಿದರೂ ಅವಳು ಅವನ ಮಾತನ್ನು ಕೇಳುತ್ತಿರಲಿಲ್ಲ. ಈ ವಿಷಯ ಅವರಿಬ್ಬರ ನಡುವೆ ಜಗಳಗಳು ತಾರಕಕ್ಕೇರುವಂತೆ ಮಾಡುತ್ತಿತ್ತು. ಅವನ ಪರೀಕ್ಷಾ ಸಮಯಗಳಲ್ಲಿಯೇ ಈ ವಿಷಯಗಳು ಅವನನ್ನು ತೀರಾ ಬಾಧಿಸುತ್ತಿದ್ದವು. ಅವನು ಅತ್ತುಕೊಂಡು ಪರೀಕ್ಷೆಗಳನ್ನು ಬರೆದದ್ದೂ ಇದೆ. ಹೀಗಿದ್ದರೂ ಬೇರೆಯ ಹುಡುಗರೊಂದಿಗಿನ ಅವಳ ಓಡಾಟಗಳು ಕಡಿಮೆಯಾಗಲೇ ಇಲ್ಲ. ಇವುಗಳೆಲ್ಲವುಗಳಿಂದ ರೋಸಿ ಹೋದ ಆದಿತ್ಯನಿಗೆ ಪ್ರೀತಿ ಬಂಧನದಂತೆ ಭಾಸವಾಗುತ್ತಿತ್ತು. ಆಕೆ ತನ್ನನ್ನು ಕೇವಲ ಬಳಸಿಕೊಂಡಳು, ತಾನು ಅವಳ ಆಟಿಕೆಯ ವಸ್ತುವಾದೆ ಎನಿಸಿಬಿಟ್ಟಿತ್ತು.

ಇವೆಲ್ಲಾ ನೋವುಗಳು ಯಾವಾಗ ಅವನ ಮನಸ್ಸನ್ನು ಘಾಸಿಗೊಳಿಸಿತು ಅವನು ಅವನ ಸ್ಥಿಮಿತವನ್ನು ಕಳೆದುಕೊಂಡು ಬಿಟ್ಟ. ಮಾನಸಿಕವಾಗಿ ಕೃಶವಾಗಿ ಅವನ ದ್ವೀತಿಯ ಪಿಯೂಸಿಯ ಪರೀಕ್ಷೆಗಳನ್ನೂ ಎದುರಿಸಲಾಗಲಿಲ್ಲ. ಅಷ್ಟು ಪ್ರತಿಭಾವಂತ ತನ್ನ ಜೀವನನ್ನು ಹಾಳು ಮಾಡಿಕೊಳ್ಳುತ್ತಿದ್ದಾನಲ್ಲಾ ಎಂದು ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತರು. ಇವನು ಹೊರಗಿನ ಪ್ರಪಂಚದ ಎಲ್ಲಾ ಕೊಂಡಿಗಳನ್ನು ಕಳೆದುಕೊಂಡು ತನ್ನ ಕೊಠಡಿ ಸೇರಿ ಬಿಟ್ಟನು. ಪ್ರೀತಿ ಮತ್ತು ಹುಡುಗಿಯರ ವಿರುದ್ಧ ತಿರಸ್ಕಾರ ಹುಟ್ಟಲು ಶುರುವಾಯಿತು. ಆ ಕೋಪಗ್ನಿ ಅವನನ್ನು ಎಲ್ಲಿಯವರೆಗೂ ತಂದು ನಿಲ್ಲಿಸಿತೆಂದರೆ ಅವನು ನಿವೇಧಿತಾಳ ಮೇಲೆ ಆಸೀಡ್ ಹಾಕಿಬಿಡುವ ತೀರ್ಮಾನಕ್ಕೆ ಬಂದುಬಿಟ್ಟ. ಅವನ ಮನಸ್ಥಿತಿಯನ್ನು ತಕ್ಷಣವೇ ಗ್ರಹಿಸಿದ ಅವನ ಪೋಷಕರು ಅವನಿಗೆ ಮಾನಸಿಕ ವೈದ್ಯರಲ್ಲಿ ಒಂದು ಕೌನ್ಸಿಲಿಂಗ್ ಕೊಡಿಸಿದ ನಂತರ ಅವನು ಖಿನ್ನತೆಯಿಂದ ಹೊರ ಬಂದನು. ಆದರೆ ಹುಡುಗಾಟದ ವಯಸ್ಸಿನಲ್ಲಿಯೇ ಮಾನಸಿಕವಾಗಿ ಸಂತನಾಗಿಬಿಟ್ಟ. ಪ್ರೀತಿ ಅವನ ಹುಡುಗಾಟಿಕೆಯನ್ನು ಕಸಿದಿತ್ತು. ಈಗ ಅವನು ಬಿ.ಬಿ.ಎಮ್ ಓದುತ್ತಿದ್ದಾನೆ, ಆಕೆ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಈಗಲೂ ಆಕೆ ಅವನ ಮುಂದೆ ಸಿಗುತ್ತಾಳೆ. ಆಕೆ ಬೇರೆ ಹುಡುಗನ ತೋಳ ತೆಕ್ಕೆಯಲ್ಲಿರುವುದನ್ನು ನೋಡಿ ತನ್ನೊಳಗೆ ನಕ್ಕು ’ಈ ಹುಡುಗಿಗೆ ಹಾಳಾಗುವ ಮುನ್ನ ಒಳ್ಳೆಯ ಬುದ್ಧಿ ಬಂದು ಕೆಲವು ಹುಡುಗರ ಜೀವನಗಳಾದರು ಉಳಿಯುವಂತಾಗಲಿ’ ಎಂದುಕೊಳ್ಳುತ್ತಾ ಮುನ್ನಡೆಯುತ್ತಾನೆ.

ಹುಡುಗರೇ ಆಗಲಿ, ಹುಡುಗಿಯರೇ ಆಗಲಿ. ಪ್ರೀತಿ ಮತ್ತು ಸ್ನೇಹಗಳ ಸರಿಯಾದ ವ್ಯತ್ಯಾಸಗಳನ್ನು ಅರಿತಿರಬೇಕು. ಯಾವುದೇ ಸಲಿಗೆಗಳೂ ಅತಿಯಾಗಬಾರದು ವಯಕ್ತಿಕ ಭಾವ ಸಂವೇಧನೆಗೆ ಒಂದಷ್ಟು ಅಂತರ ಅಗತ್ಯವೆನಿಸುತ್ತದೆ. ಜೀವನವನ್ನು ಭಾವುಕವಾಗಿ ನೋಡುವ ಬದಲು ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಬೇಕಾಗುತ್ತದೆ. ಹರೆಯದ ಹುಚ್ಚಾಟಗಳಿಗೆ ಬುದ್ಧಿಯನ್ನು ಕೊಟ್ಟರೆ ಅದು ಎಲ್ಲಿ ನಿಲ್ಲಿಸುತ್ತದೆ ಎಂಬುದೇ ತಿಳಿಯುವುದಿಲ್ಲ. ಆದಿತ್ಯನ ಪೋಷಕರು ಅವನ ಮನಸ್ಥಿತಿಯನ್ನು ಗಮನಿಸದೇ ಇರುತ್ತಿದ್ದರೆ ಅವನು ಈಗ ಒಬ್ಬ ಹಂತಕನಾಗಿಯೋ, ಇಲ್ಲ ಸಮಾಜ ಘಾತುಕನಾಗಿಯೋ ಇರುತ್ತಿದ್ದ. ಆ ಹುಡುಗಿ ಪ್ರೀತಿ ಮಾಡಿದ ಮೇಲೆ ಅದನ್ನು ಟೈಂ ಪಾಸ್ ಗೆ ಎಂದುಕೊಳ್ಳದೆ ಜೀವನ ಪರ್ಯಂತಕ್ಕೆ ಎಂದುಕೊಳ್ಳಬೇಕಾಗುತ್ತದೆ. ಪ್ರೀತಿಯಲ್ಲಿ ನಂಬಿಕೆ ಎಷ್ಟು ಮುಖ್ಯವೋ ಬದ್ಧತೆಯೂ ಅಷ್ಟೇ ಮುಖ್ಯ.

- ಪ್ರಸಾದ್.ಡಿ.ವಿ.