ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 5 January 2012

ಕ್ಯಾಂಟೀನ್ ಪುರಾಣಗಳು

 ಸಾಮಾನ್ಯವಾಗಿ ಕಾಲೇಜ್ ನ ಕ್ಯಾಂಟೀನ್, ಕ್ಯಾಂಪಸ್ ಕಾರಿಡಾರ್ ಮತ್ತು ಪಾರ್ಕಿಂಗ್ ಲಾಟ್ ಗಳಲ್ಲಿ ನಡೆಯುವ ಸನ್ನಿವೇಶಗಳಿಗೆ ಹಾಸ್ಯದ ಲೇಪನ ನೀಡಿ ನಿರೂಪಿಸುವ ಒಂದು ಸಣ್ಣ ಪ್ರಯತ್ನವೇ "ಕ್ಯಾಂಟೀನ್ ಪುರಾಣ" ಸೀರೀಸ್. ಈ ಪುರಾಣದಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕವಾಗಿಯೂ ಇರಬಹುದು, ನಿಜವಾಗಿಯೂ ಇರಬಹುದು. ಒಂದು ಪುರಾಣಕ್ಕೂ ಮತ್ತೊಂದು ಪುರಾಣಕ್ಕೂ ಸಂಬಂಧವಿರುವುದಿಲ್ಲ. ಪಾತ್ರಧಾರಿಗಳಾಗುವವರು ಬೇಸರಿಸದೆ ಎಂಜಾಯ್ ಮಾಡಿ. ಲಾಫ್ಟರ್ ಟಾನಿಕ್ ನೀಡುವ ಒಂದು ಪ್ರಾಮಾಣಿಕ ಪ್ರಯತ್ನವಿದು.

ಕ್ಯಾಂಟೀನ್ ಪುರಾಣ-೧

ಅಂದು ಎರಡು ಪೀರಿಯಡ್ ಕ್ಲಾಸ್ ನಲ್ಲಿ ಕೂತದ್ದು ಯುಗದಂತೆ ಭಾಸವಾಗಿತ್ತು. ಬೋರ್ ಹೊಡೆಯುತ್ತಿದ್ದರಿಂದ ಕ್ಲಾಸ್ ನಲ್ಲಿದ್ದರೂ ಡೋರ್ ಓಪನ್ ಆಗಿದ್ದರಿಂದ ಕಾರಿಡಾರ್ ನಲ್ಲಿ ಅಡ್ಡಾಡುವ ಹುಡುಗಿಯರನ್ನು ಸಿನ್ಸಿಯರ್ ಆಗಿ ನೋಡುತ್ತಾ ಕುಳಿತಿದ್ದೆ. ಏಕೆಂದರೆ ನಮ್ಮ ಕ್ಲಾಸಿನ ಫಿಗರ್ ಗಳನ್ನು ದಿನವೂ ನೋಡಿ-ನೋಡಿ ಬೋರ್ ಹೊಡೆದು ಹೋಗಿತ್ತು. ನಮ್ಮ ಕ್ಲಾಸ್ ನ ಹುಡುಗಿಯರು ಶಾಕಿಣಿ, ಡಾಕಿನಿಯರ ತರ ಕಾಣಿಸುತ್ತಿದ್ದರು ಈಗೀಗ..!!! ಮೂರನೆ ಕ್ಲಾಸ್ ಗೆ ಒಳಗೆ ಕುಳಿತಿರಲಾಗದೆ ಚೇತನ್ ಗೆ ಪ್ರಾಕ್ಸಿ ಹಾಕಲು ಹೇಳಿ ಬಂಕ್ ಮಾಡಿ ಕ್ಲಾಸ್ ನ ಹೊರಬಿದ್ದೆ. ಹೊರಗೆ ಬರುತ್ತಿದ್ದಂತೆ ನಮ್ಮ ಕ್ಲಾಸ್ ನ ’ಶಾರುಖ್ ಖಾನ್’ ಪ್ರಶಾಂತ್ ಎದುರುಗೊಂಡ.
"ಏನೋ ಕ್ಲಾಸ್ ಬಂಕಾ? ಯಾರದು ಕ್ಲಾಸ್ ಈಗ?" ಎಂದ.
ನಾನು "ಅದೇ ಮಗ ಬೋರಿಂಗ್ ಕ್ಲಾಸ್, ಆ ಕ್ಲಾಸ್ ನಲ್ಲಿ ಕುಳಿತು ಮೊಳೆ ಹೊಡೆಸಿಕೊಳ್ಳುವುದಕ್ಕಿಂತ ನೇಣು ಹಾಕ್ಕೊಳ್ಳೋದೆ ವಾಸಿ ಅಂತ ಹೊರಬಂದೆ" ಎಂದೆ.
"ಲೇ ನಾನು ತಿಂಡಿ ತಿಂದಿಲ್ಲ ಮಚ್ಚಾ, ಕ್ಯಾಂಟೀನ್ ಗೆ ಬರ್ತೀಯಾ ಸುಮ್ಮನೆ ಕಂಪೆನಿ ಕೊಡುವಂತೆ" ಎಂದವನು ಕರೆದ.
"ಮಚ್ಚಾ ಈ ಧನ್ಯ ಆವಾಗಿಂದ ಕಾರಿಡಾರ್ ನಲ್ಲೆ ಅಲೆಯುತ್ತಿದ್ದಾಳೆ, ಇವತ್ತು ಮಸ್ತಾಗಿ ಕಾಣ್ತಾವ್ಳೆ, ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಮಗಾ" ಎಂದೆ.
"ಅಯ್ಯೋ ಲೋಫರ್ ಅವಳೋ ೭ ಅಡಿ, ನೀನು ಐದೂವರಡಿ(5.8), ನೀನು ಅವಳ ಜೊತೆ ನಿಲ್ಲೋಕು ಸ್ಟೂಲ್ ಬೇಕು ಮುಚ್ಕೊಂಡು ನನ್ನಜೊತೆ ಬಾ" ಎಂದು ಎಳೆದುಕೊಂಡು ಹೋದ.
ನಾನು ಮನಸ್ಸಿನಲ್ಲಿಯೇ ಆಕಾಶಕ್ಕೆ ಏಣಿ ಹಾಕಿದ್ರೂ ಸರಿಯೇ, ಸ್ಟೂಲ್ ಸಹವಾಸ ಬೇಡವೆಂದು ಅವನೊಂದಿಗೆ ಕ್ಯಾಂಟೀನ್ ಕಡೆ ಹೊರಟೆ.

ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಆದ ನಮಗೆ ಡ್ರೆಸ್ ಕೋಡ್ ಆಗಿ ಯುನಿಫಾಂ ಮಾಡಿದ್ದರಿಂದ ಬುಧವಾರ ಮತ್ತು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಕಲರ್ಸ್ ಇದ್ರೂ ಕಾಲೇಜ್ ಕಲರ್ ಲೆಸ್ ಆಗಿತ್ತು..:( ಆದ್ರೆ ಆವತ್ತು ಬುಧವಾರವಾದ್ದರಿಂದ ಕಣ್ಣಿಗೆ ಕೂಲಿಂಗ್ ಗಾಗಲ್ಸ್ ಹಾಕದೆ ಕಣ್ಣು ತಂಪಾಗಿತ್ತು...;)

ಪಾರ್ಕಿಂಗ್ ಲಾಟ್ ನಲ್ಲಿ ಹಾದು ಹೋಗುವಾಗ ಜೂನಿಯರ್ ಆದ ನಿಶಾ ತನ್ನ ಗೆಳತಿಯೊಂದಿಗೆ "ಹೇ ಯು ನೊ ಐಯಂ ಟ್ರೈಯಿಂಗ್ ಟು ಹ್ಯಾವ್ ಜೀರೋ ಫಿಗರ್" ಎಂದುಲಿದಳು. ನಾನು ಧನಿಯೇರಿಸಿ "ಸೊಂಟ ಹುಳುಕೀತು ಹುಷಾರು, ಕರೀನಳ ವೇಯ್ಟ್ ತಾಳಲಾಗದೆ ಅವಳ ಸೊಂಟ ಮುರಿಯಿತಂತೆ" ಎಂದೆ.
ಪಾಪದ ಹುಡುಗಿ ಹೆದರಿ, ಆ ಕಡೆಗೆ ದೂರ ಸರಿದುಬಿಟ್ಟಳು.
ಈ ಕಡೆ ಪ್ರಶಾಂತ "ಅಯ್ಯೋ ನನ್ನ ಮಗನೆ ನೀನು ಉದ್ಧಾರ ಆಗಲ್ಲ" ಎಂದ.
ನಾನೂ ಜೋರಾಗಿ ನಗುತ್ತಾ, "ಅಲ್ವಾ, ನಂಗೂ ಹಂಗೇ ಅನ್ಸುತ್ತೆ ಶಿಷ್ಯ" ಎಂದೆ...!
ಅಷ್ಟರೊಳಗೆ ಪ್ರಶಾಂತನ ಸಾಮ್ಸ್(ಸಮಂತಾ) ಒಂದು ಚಾಕೊಲೇಟ್ ಕೋನ್ ಹಿಡಿದು ಒಂದು ಪ್ಲೇಟ್ ಗೋಬಿಯನ್ನು ತನ್ನ ಮುಂದಿಟ್ಟುಕೊಂಡು ತನ್ನ ಫ್ರೆಂಡ್ಸ್ ಜೊತೆ ಕುಳಿತಿರುವುದು ಕಾಣಿಸಿತು.
"ಲೋ ಮಗಾ ನಿಮ್ಮುಡ್ಗಿ ಐಸ್ ಕ್ರೀಂ ಹಿಡ್ಕೊಂಡವ್ಳೆ, ಐಸ್ ಕ್ರೀಂ ಕರಗಿ ಹೋದೀತಲೆ" ಎಂದು ಪ್ರಶಾಂತನ ಬೆನ್ನಿಗೊಂದು ಪೆಟ್ಟು ಕೊಟ್ಟೆ.
ಈ ಪ್ರಶಾಂತ ಅವಳ ಅಟ್ರಾಕ್ಷನ್ ಸೆಳೆಯಲು ತನ್ನ ಸ್ಯಾಂಸಂಗ್ ಸೆಲ್ ಅನ್ನು ಯಾರೊಂದಿಗೋ ಮಾತನಾಡುವಂತೆ ಹಿಡಿದುಕೊಂಡ.
ಅಲ್ಲಿ ಪ್ರಶಾಂತನ ಇನ್ನೊಬ್ಬ ಸ್ನೇಹಿತ ಲ್ಯಾಬ್ ರೆಕಾರ್ಡ್ ಬರೀತಾ ಕುಳಿತಿದ್ದ. ಪ್ರಶಾಂತ ಎರಡು ಇಡ್ಲಿ ತೆಗೆದುಕೊಂಡ, ನಾನು ಸ್ಲೈಸ್ ತೆಗೆದುಕೊಂಡು ಅವಳು ಕಾಣಿಸುವಂತೆ ಪ್ರಶಾಂತನ ಫ್ರೆಂಡ್ ಟೇಬಲ್ ಗೆ ಹೋಗಿ ಕುಳಿತೆವು.
ಇವನು ಇಡ್ಲಿ ತಿನ್ನುತ್ತಾ ಫೋನ್ ನಲ್ಲಿ "ಹಲೋ ಮಗಾ, ಕ್ಯಾಂಟೀನ್ ನಲ್ಲಿದ್ದೀನಿ ಕಣೋ ನಮ್ಮುಡ್ಗಿಗೆ ಐಸ್ ಕ್ರೀಂ ತಿನ್ನಿಸ್ತಿದ್ದೀನಿ" ಎಂದ ಅವಳಿಗೆ ಕೇಳಿಸುವಂತೆ.
ಅಸಲಿಗೆ ಅವನಿಗೆ ಯಾವುದೇ ಕರೆಯೂ ಇರಲಿಲ್ಲ, ಆ ಹುಡುಗಿಯನ್ನು ಇವನ ಕಡೆ ನೋಡುವಂತೆ ಮಾಡಬೇಕಿತ್ತು ಅಷ್ಟೆ..!!
ಅವಳು ಇವನ ಮಾತನ್ನು ಕೇಳಿ, ಆ ಕಡೆ ಮುಖ ಮಾಡಿ ಮುಗುಳು ನಗುತಿದ್ದಳು. ಅದನ್ನು ನೋಡಿದ ಇವನು ಫುಲ್ ಜೂಮ್ ನಲ್ಲಿದ್ದ.
ಪ್ರಶಾಂತನ ಸ್ನೇಹಿತ, "ಲೋ ಒಂದು ಐಸ್ ಕ್ರೀಂ ತಿನ್ನಲು ಎಷ್ಟೊತ್ತು ಬೇಕು ಗುರು?" ಎಂದು ಕೇಳಿದ.
"ಚಿಕ್ಕ ಮಗುವಾದ್ರೂ ೩ ರಿಂದ ೫ ನಿಮಿಷ ಸಾಕು ಗುರು" ನಾನಂದೆ.
"ಅವಳು ನೋಡು ಮಗಾ, ಒಂದೂವರೆ ಗಂಟೆಯಿಂದ ಅದೇ ಐಸ್ ಕ್ರೀಂ ಇಡ್ಕೊಂಡು ಕೂತಿದ್ದಾಳೆ. ಅಲ್ಲ ನನಗೊಂದು ಅನುಮಾನ ಅವಳು ಪ್ರತಿ ಸಲ ತಿನ್ನುವಾಗ್ಲೂ ಆ ಐಸ್ ಕ್ರೀಂನ ಚಾಕೊಲೇಟ್ ಅಟ್ ಲೀಸ್ಟ್ ಅವಳ ನಾಲಿಗೆಗೆ ಟಚ್ ಆಗ್ತಿದ್ಯೋ ಏನೋ ಅಂತ? ನನಗನ್ಸುತ್ತೆ ಅವಳು ತಿನ್ನೋಕು ಮುಂಚೆನೇ ಆ ಐಸ್ ಕ್ರೀಂ ಕರಗಿ ಹೋಗುತ್ತೆ ಅಂತ" ಎಂದು ಗೊಳ್ ಎಂದು ನಗಲಾರಂಭಿಸಿದ.
ನಾನೂ ಬಿದ್ದು ಬಿದ್ದು ನಗುತ್ತಾ, "ಪ್ರಶಾಂತ ಇದಕ್ಕಿಂತ ಅವಮಾನ ಬೇಕಾ ನಿಂಗೆ, ಕೊತ್ತಂಭರಿ ಗಿಡಕ್ಕೆ ಹೋಗಿ ನೇಣು ಹಾಕ್ಕೋ" ಎಂದೆ.
ಪ್ರಶಾಂತನ ಫ್ರೆಂಡ್ ನನ್ನ ಕೈಮೇಲೆ ಹೊಡೆದು ನನ್ನನ್ನು ಅಭಿನಂದಿಸಿದ.
ಇವನು ಹುಸಿ ಕೋಪ ನಟಿಸುತ್ತಾ, "ಮಕ್ಳ ಅದು ಅವಳ ಯುನೀಕ್ ಸ್ಟೈಲ್ ಕಣ್ರೊ, ಒಂದೂವರೆ ಗಂಟೆ ಯಾರಾದ್ರೂ ಐಸ್ ಕ್ರೀಂ ತಿಂತಾರಾ? ನೋಡು ನಮ್ಮುಡ್ಗಿ ತಿಂತಾಳೆ ಆ ಐಸ್ ಕ್ರೀಂ ಕೂಡ ಕರಗದಂತೆ ನೋಡ್ಕೊಳ್ತಾಳೆ ಗೊತ್ತಾ? ಹೆಂಗೆ" ಎಂದು ತನ್ನ ಬೆನ್ನನ್ನು ತಾನೆ ತಟ್ಟಿಕೊಂಡ.
ಮತ್ತೂ ಮುಂದುವರೆದು "ಜೊತೆಗೆ ಗೋಬಿ ಇದೆಯಲ್ಲ ಮಗಾ, ಐಸ್ ಕ್ರೀಂ ತಿನ್ನೋದು ಒಂದು ಪೀಸ್ ಗೋಬಿ ತಿನ್ನೋದು ಹಾಗೆ ತಿನ್ನೋದು ಅವಳು" ಎಂದ.
"ಲೋ ಅವಳು ಹೀಗೇ ತಿಂತಿದ್ರೆ ಒಂದಿನ ಇನ್ವಿಸಿಬಲ್ ಆಗ್ಬಿಡ್ತಾಳೆ, ಈಗಿರೋದೆ ಸ್ಕೆಲಿಟನ್ ತರ" ಎಂದು ಪ್ರಶಾಂತನ ಫ್ರೆಂಡ್ ಬೊಬ್ಬಿಟ್ಟ.
"ಲೋ ಅವಳು ನನ್ನ ಪ್ರೀತಿ ಒಪ್ಕೊಂಡ್ಮೇಲೆ ನಾನೇ ತಿನ್ಸೋದಲ್ವ, ಆಗ ತಯಾರಿ ಮಾಡ್ತೀನಿ ಬಿಡು" ಎಂದ ಪ್ರಶಾಂತ.
ನಾವಿಬ್ಬರು "ಹೋ" ಎಂದು ಹೋಕಾರ ಎಳೆದೆವು.
"ಆಮೇಲೆ ಅವಳಿಂದೆ ತಿರುಗಿ ತಿರುಗಿ ದೇವದಾಸ್ ಅಗ್ಬಿಟ್ಟೀಯ ಪ್ರಶಾಂತ, ಮೊದಲೆ ನಿಮ್ಮ ಶಾರುಖ್ ಆ ಫಿಲ್ಮ್ ಹೀರೊ" ಎಂದೆವು ನಾವು.
"ಅಂತದ್ದೆಲ್ಲ ಸೀನ್ ಇಲ್ಲ, ನಾನ್ಯಾವಗ್ಲೂ ಲವರ್ ಬಾಯ್" ಎಂದ ಪ್ರಶಾಂತ.

ಹೆಂಗೊ ಸಮಂತಾ ಐಸ್ ಕ್ರೀಂ ತಿಂದು ಮುಗಿಸಲು ಎರಡು ಗಂಟೆ ತೆಗೆದುಕೊಂಡಳು..!
ಅವಳಿಗೆ ಇವನು ಐಸ್ ಕ್ರೀಂ ತಿನ್ನಿಸಿ, ನಾವು ಇವನಿಗೆ ಇಡ್ಲಿ ತಿನ್ನಿಸುವುದರೊಳಗೆ ಮುಂದಿನ ಪಿರಿಯಡ್ ಗೆ ಐದು ನಿಮಿಷವಿತ್ತು ಅಷ್ಟೆ.
"ಹೇ ಬಾರ್ಲೆ ಮುಂದಿನ ಕ್ಲಾಸ್ ಗೆ ಲೇಟಾಗುತ್ತೆ" ಎಂದು ಅವನ ಕೈಯಿಡಿದು ಎಳೆದೆ, ಇಬ್ಬರೂ ಕ್ಲಾಸ್ ಕಡೆಗೆ ಓಡಿದವು.

- ಪ್ರಸಾದ್.ಡಿ.ವಿ. 
ಚಿತ್ರಕೃಪೆ: ಅಂತರ್ಜಾಲ (ವರುಣ್)

4 comments:

  1. ನಿಮ್ಮ ಕ್ಯಾಂಟಿನ್ ಪುರಾಣವು ತಿಳಿ ಹಾಸ್ಯದೊಂದಿಗೆ ಸೊಗಸಾಗಿ ಮೂಡಿದೆ.ಮುಂದಿನ ಬರಹಗಳಲ್ಲಿ ಆದಷ್ಟು ಸಂಕ್ಷಿಪ್ತತೆ ಇರಲಿ.ಬೇಗನೇ ಓದಿ ಮುಗಿಸಬೇಕೆಂಬ ಭಾವನೆ ಮೂಡದಂತೆ ಇಷ್ಟಪಟ್ಟು ಓದಿಸಿಕೊಂಡು ಹೋಗುವಂತೆ ಭಾವನೆಗಳನ್ನು ಹರಿಬಿಡಿ.ಆದಷ್ಟು ಸಮಾಜಮುಖಿ ಚಿಂತನೆ ಇರಲಿ.ಇಷ್ಟ ಪಟ್ಟು ಓದಿ ಅಭಿಪ್ರಾಯಿಸಿದ್ದೇನೆ.

    ReplyDelete
  2. ಚೆನ್ನಾಗಿದೆ, ಕಾಲೇಜಿನ ಸರ್ವೇಸಾಮಾನ್ಯ ಪರಿಸ್ಥಿಯ ನಿಜ ಪರಿಚಯ ಇದೆ... ಮುಂದುವರೆಯಿಸಿ. :)

    ReplyDelete
  3. ಧನ್ಯವಾದಗಳು ಸೋಮಣ್ಣ, ಇಂತಹ ಮಾರ್ಗದರ್ಶಕ ನುಡಿಗಳೆ ಮನದಲ್ಲಿನ ಬರಹಗಾರನನ್ನು ಇನ್ನಷ್ಟು ಪಕ್ವತೆಯೆಡೆಗೆ ಒರಳುವಂತೆ ಮಾಡುವುದು.. ನಿಮ್ಮ ಅಭಿಪ್ರಾಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಮುಂದಿನ ಬರಹಗಳಲ್ಲಳವಡಿಸಿಕೊಳ್ಳುತ್ತೇನೆ..:)))

    ReplyDelete
  4. ಧನ್ಯವಾದಗಳು ಸೂರಜ್..:)))

    ReplyDelete